ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹಾಸ್ಯರಸ ಚಕ್ರವರ್ತಿ ಕುಂಜಾಲು ಪ್ರಸಂಗ ಮಂಗಳ

ಲೇಖಕರು :
ವಿ.ಆರ್.ಭಟ್
ಶನಿವಾರ, ಆಗಸ್ಟ್ 2 , 2014

ಕುಂಜಾಲು ಎಂದರೆ ಯಕ್ಷಪ್ರಿಯರ ಮೊಗದಲ್ಲಿ ನಗೆ ಮಿಂಚುತ್ತದೆ. ಪ್ರಖ್ಯಾತ ಕೆರೆಮನೆ ಯಕ್ಷಗಾನ ಮೇಳದಲ್ಲಿ 60-70-80ರ ದಶಕದಲ್ಲಿ ಹಾಸ್ಯ ಪಾತ್ರವನ್ನು ಪೋಷಿಸಿದ ಕಲಾವಿದ ಕುಂಜಾಲು ರಾಮಕೃಷ್ಣ ನಾಯಕ್. ಲಘುಹಾಸ್ಯ- ಪರಿಹಾಸ್ಯ- ತಿಳಿಹಾಸ್ಯ- ವಿಡಂಬನೆ ಎಂಬ ನಾಲ್ಕು ಮುಖದ ಹಾಸ್ಯ ಶೈಲಿಯನ್ನು ಬಳಸಿಕೊಂಡು, ಯಾರನ್ನೂ ಅಪಹಾಸ್ಯ ಮಾಡದೇ, ತನ್ನ ಗಂಭೀರ ಹಾಸ್ಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದವರು ಕುಂಜಾಲು.

ಪಾದುಕಾ ಪಟ್ಟಾಭಿಷೇಕದ ಮಂಥರೆ, ಹರಿಶ್ಚಂದ್ರದ ನಕ್ಷತ್ರಿಕ, ಉತ್ತರ ಕುಮಾರ, ಭೀಷ್ಮ ವಿಜಯ ಮತ್ತು ದಕ್ಷಯಜ್ಞದ ವೃದ್ಧ ಬ್ರಾಹ್ಮಣ, ಸಮಗ್ರ ಭೀಷ್ಮದ ಕಂದರ, ಗದಾಯುಧ್ಧದ ಬೇವಿನಚರ, ಸುಹಾಸಿನಿ ಪರಿಣಯದ ಹೆಡ್ಡ, ಚಂದ್ರಾವಳಿ ವಿಲಾಸದ ಪೆದ್ದ ವಟು ಇತ್ಯಾದಿ ಹಾಸ್ಯಪಾತ್ರಗಳು ಸಾಕ್ಷಾತ್ ಕಣ್ಣಿಗೆ ಕಟ್ಟಿ- ಹೃದಯ ತಟ್ಟಿ, ಮನದಲ್ಲಿ ಅಚ್ಚೊತ್ತಿ ನಿಲ್ಲುವುದಕ್ಕೆ ಕಾರಣೀಭೂತರಾಗಿ, ರಸಿಕರಿಂದ ಹಾಸ್ಯಚಕ್ರವರ್ತಿ ಎಂದು ಅನಭಿಷಿಕ್ತವಾಗಿ ಬಿರುದನ್ನು ಪಡೆದವರು- ಬಡಗುತಿಟ್ಟಿನ ಅಭಿಜಾತ ಕಲಾವಿದ ಕುಂಜಾಲು.

ಯಕ್ಷರಂಗದ ಈ ತೆನಾಲಿ, ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಪುಟ್ಟ ಗ್ರಾಮದಲ್ಲಿ, 1945ರಲ್ಲಿ, ಪದ್ಮನಾಭ ನಾಯಕ್- ಶಾರದಾಬಾಯಿ ದಂಪತಿಯ ಪುತ್ರನಾಗಿ ಜನಿಸಿದವರು. ಕುಂಜಾಲು ಕನ್ನಡಶಾಲೆಯಲ್ಲಿ ಏಳನೇ ತರಗತಿವರೆಗೆ ಓದಿ, ನಂತರ ಪ್ರಸಿದ್ಧ ಭಾಗವತ ಗೋಪಾಡಿ ವಿಠಲ ಪಾಟೀಲರ ತಂಡ ಸೇರಿಕೊಂಡು, ನವರಾತ್ರಿಯಲ್ಲಿ ನಡೆಯುವ ಹೂವಿನ ಕೋಲಿನ ಕಲಾವಿದರಾಗಿ ತಿರುಗಾಟ ಮಾಡಿದರು. ಅವರಲ್ಲೇ ತಾಳ ಲಯದ ನಿಘಂಟನ್ನು ಅಭ್ಯಸಿಸಿದರು. ಹಾಸ್ಯ ಕಲಾವಿದನಾಗಿ ಬೆಳೆಯಲು ಬಡಗುತಿಟ್ಟಿನಲ್ಲಿ ಹಿಂದೆ ಪ್ರಸಿದ್ಧರೆನಿಸಿದ್ದ ಹಾಸ್ಯಗಾರ ಕೊರಗಪ್ಪ ದಾಸರೇ ಕಾರಣ ಎನ್ನುತ್ತಿದ್ದ ಕುಂಜಾಲುವಿಗೆ ಪರಿಪೂರ್ಣ ಕಲಾವಿದನಾಗಿ ಬೆಳೆಯಲು ಇನ್ನೊಬ್ಬ ಗುರು ವೀರಭದ್ರ ನಾಯಕ ಕಾರಣ ಎಂಬ ಕೃತಜ್ಞತೆ ಇತ್ತು. ನಾಯಕರ ಒದೆತವೇ ನನಗೆ ವರವಾಗಿ ಪರಿಣಮಿಸಿತು ಎಂದು ವಿನಮ್ರವಾಗಿ ಹೇಳಿಕೊಳ್ಳುತ್ತಿದ್ದರು.

ಅತಿವಿಶಿಷ್ಟ ಧ್ವನಿ, ವೈವಿಧ್ಯಮಯ ಅಂಗಚಲನೆ, ಕಣ್ಣುಗಳಲ್ಲಿ ಹೊರಸೂಸುವ ಸನ್ನಿವೇಶಾಧಾರಿತ ಭಾವನೆಗಳು, ಅಸ್ಖಲಿತ- ಹಿತಮಿತ- ಹಾಸ್ಯರಸಪೂರಿತ ವಾಗ್ಝರಿ, ಅವರೇ ಬರೆದುಕೊಳ್ಳುವ ವರ್ಣನಾತೀತ ಮುಖವರ್ಣಿಕೆ- ಧರಿಸುವ ಆಭೂಷಣಗಳು ಇವೆಲ್ಲವುಗಳಿಂದ ಸುಮಾರು ನಾಲ್ಕು ದಶಕ ಕಾಲ ಇಡಗುಂಜಿ, ಸಾಲಿಗ್ರಾಮ ಮೊದಲಾದ ಯಕ್ಷಗಾನ ಮೇಳಗಳಲ್ಲಿ ಹಾಸ್ಯಪಾತ್ರಗಳ ಮೂಲಕ ಸೇವೆ ಸಲ್ಲಿಸಿದ್ದಾರೆ. ಒಮ್ಮೆ ಕೊಲ್ಲೂರು ಮೇಳದಲ್ಲಿದ್ದಾಗ ಬೇಡರ ಕಣ್ಣಪ್ಪ ಪ್ರಸಂಗದಲ್ಲಿ ವೀರಭದ್ರ ನಾಯಕರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಜೊತೆಯಾಗಿ ಕಾಶಿ ಮಾಣಿ ಪಾತ್ರ ಮಾಡಬೇಕಾಗಿದ್ದ ಪ್ರಸಿದ್ದ ಹಾಸ್ಯಗಾರರಾದ ಕೊರಗಪ್ಪ ಹಾಸ್ಯಗಾರರು ರಜೆ ಹಾಕಿದ್ದರು. ಆಟದ ಕಂತ್ರಾಟುದಾರರು ಅದೇ ಪ್ರಸಂಗ ಆಗಬೇಕೆಂದು ಪಟ್ಟು ಹಿಡಿದಾಗ, ಉಪ್ಪೂರು ಭಾಗವತರು ಮತ್ತು ವೀರಭದ್ರ ನಾಯಕರು ಸೇರಿ, ಸಹ ವಿದೂಷಕಪಾತ್ರ ಮಾಡುತಿದ್ದ ಕುಂಜಾಲು ಅವರೇ ಕಾಶೀಮಾಣಿಯಾಗಿ ರಂಗ ಪ್ರವೇಶ ಮಾಡುವಂತೆ ನೋಡಿಕೊಂಡರು. ಪ್ರಥಮ ಪ್ರಯೋಗದಲ್ಲೇ ಪ್ರೇಕ್ಷಕರು ವೇದಿಕೆಯಲ್ಲಿ ಪ್ರತ್ಯಕ್ಷ ಕಾಶೀಮಾಣಿಯನ್ನೇ ಕಂಡರು! ಅಂದಿನಿಂದ ಜನ ಕುಂಜಾಲುವನ್ನು ಕಾಶಿಮಾಣಿ ಎಂದೇ ಗುರುತಿಸಿದರು.

ರಂಗಧರ್ಮ, ಸಭ್ಯತೆಯ ಎಲ್ಲೆ ಮೀರದೆ ಪಾತ್ರ ಪೋಷಣೆ ಮಾಡುತ್ತಾ ಪ್ರೇಕ್ಷಕರನ್ನು ಗೆಲ್ಲುವುದೊಂದು ಸವಾಲು. ಅಂತಹ ಸವಾಲನ್ನು ತನ್ನ ಸಹಜಾಭಿನಯ ಚಾತುರ್ಯದಿಂದ ಸ್ವೀಕರಿಸಿ ಗೆದ್ದವರು ಕುಂಜಾಲು. ನಾರ್ಣಪ್ಪ ಉಪ್ಪೂರ, ವೀರಭದ್ರ ನಾಯಕ, ಶಿರಿಯಾರ ಮಂಜು ನಾಯ್ಕ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ ಮೊದಲಾದ ಯಕ್ಷದಿಗ್ಗಜಗಳ ಸಾಂಗತ್ಯದಲ್ಲಿ ಪಾತ್ರ ನಿರ್ವಹಿಸಿದವರು ಕುಂಜಾಲು.

ದಮಯಂತಿ ಕಲ್ಯಾಣದ ಮಹಾಬಲ ಹೆಗಡೆಯವರ ಋತುಪರ್ಣ- ಶಂಭು ಹೆಗಡೆಯವರ ಬಾಹುಕ ಪಾತ್ರಕ್ಕೆ ಸುದೇವ ಬ್ರಾಹ್ಮಣನಾಗಿ ಆ ಚಿಕ್ಕ ಪಾತ್ರದ ಇವರ ಅಭಿನಯ ಪ್ರೇಕ್ಷಕರ ಮನಕರಗಿಸುತ್ತಿತ್ತು. ಮಹಾಬಲ ಹೆಗಡೆಯವರ ದುಷ್ಟಬುದ್ಧಿಗೆ ಇವರ ಕಪ್ಪದ ದೂತ ಪಾತ್ರ ಖ್ಯಾತ ಜೋಡಿಯೆನಿಸಿತ್ತು. ಶಿರಸಿ ಮೇಳದ ಭಾಗ್ಯ ಭಾರತಿ ಪ್ರಸಂಗದಲ್ಲಿ ತೆಕ್ಕಟ್ಟೆ ಆನಂದ ಮಾಸ್ತರೊಂದಿಗೆ ನಿರ್ವಹಿಸಿದ ಮರ್ತಪ್ಪ- ಚರ್ಡಪ್ಪರ ಜೋಡಿ ವೇಷ ಅಪಾರ ಜನಮನ್ನಣೆ ಪಡೆದಿತ್ತು. ಲಾಬಿ-ಲಂಚ ಯಾವುದನ್ನೂ ಅರಿಯದ ಕುಂಜಾಲು, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಜನರ ನಾಡಿಮಿಡಿತವನ್ನರಿತು, ಸರಳ ಸುಂದರ ಪದಪ್ರಯೋಗಗಳೊಂದಿಗೆ, ಕಾಣದ ಲೋಕವನ್ನೇ ರಂಗದಲ್ಲಿ ಹಾಸ್ಯಮಯವಾಗಿ ಚಿತ್ರಿಸುತ್ತಿದ್ದ ಅಭಿಜಾತ ಕಲಾವಿದ ಕುಂಜಾಲು ಕಳೆದ ಹದಿನೈದು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದರು. ಬಡತನವನ್ನೇ ಉಂಡುಟ್ಟ ಕುಂಜಾಲು ಮೊನ್ನೆ ಜೂನ್ 14ರಂದು ತಮ್ಮ ಜೀವನ ಕಥಾನಕಕ್ಕೆ ಶಾಶ್ವತ ವಿದಾಯ ಹೇಳಿದ್ದಾರೆ.



ಕೃಪೆ : http://www.kannadaprabha.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ